ಗಂಟಲಮಣಿ-
ಧ್ವನಿನಾಳ ಇಲ್ಲವೇ ಧ್ವನಿಸಂಪುಟದಲ್ಲಿ ಬಲು ದೊಡ್ಡ ಭಾಗವಾಗಿರುವ ಗುರಾಣಿಕ ಮೆಲ್ಲೆಲುಬಿನ ಮೇಲಂಚು ಮುಂಗತ್ತಿನಲ್ಲಿ ಉಬ್ಬಿದಂತಿರುವ ಭಾಗ (ಅದಾಮ್ಸ್ ಆಪಲ್). ತಿನ್ನಬಾರದ ಹಣ್ಣನ್ನು ಆದಮ ನುಂಗಿ ಬಿಟ್ಟಿದ್ದರಿಂದ ಅದು ಗಂಟಲಲ್ಲೇ ಸಿಲುಕಿಕೊಂಡು ಆ ಭಾಗ ಊದಿಕೊಂಡಿತೆಂಬ ಕತೆ ಉಂಟು. ಗಂಟಲ ಮಣಿ ಹೆಂಗಸರಿಗಿಂತಲೂ ಗಂಡಸರಲ್ಲೇ ಎದ್ದು ತೋರುತ್ತದೆ. ಏನಾದರೂ ನುಂಗುವಾಗ ಗಂಟಲಮಣಿ ಮೇಲಕ್ಕೆ ಏರುತ್ತದೆ. ನುಂಗುವಾಗ ಆಹಾರ ಉಸಿರು ನಾಳದೊಳಕ್ಕೆ ಹೋಗದಂತೆ ಅಡ್ಡಗಟ್ಟುವ ಕವಾಟ ಏರ್ಪಾಡಿದು. ಗಂಟಲಮಣಿಯ ಮೇಲೆ ಗಟ್ಟಿಯಾಗಿರುವ ಕ್ರೈಕಾಯ್ಡ್ ಮೆಲ್ಲೆಲುಬಿನ ಒಂದು ಉಂಗುರ ತಾಕುತ್ತದೆ. ಗಂಟಲಲ್ಲಿ ಏನಾದರೂ ಹೇಗಾದರೂ ಅಡಚಣೆಯಾಗಿ ಉಸಿರು ಕಟ್ಟಿದ್ದರೆ ವೈದ್ಯರು ಹಿಂದುಮುಂದು ನೋಡದೆ ತುರ್ತಾಗಿ ಈ ಗುಣಿಯಲ್ಲಿ ತೂತು ಮಾಡಿ ಸರಾಗವಾಗಿ ಉಸಿರಾಡುವಂತೆ ಮಾಡುವುದುಂಟು. 			(ಡಿ.ಎಸ್.ಎಸ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ